ಮಲೆನಾಡಿನ ಹಸಿರು ಸಿರಿಯ ಮಧ್ಯೆದಲ್ಲಿ 'ಕಮ್ಮತ್ತಳ್ಳಿ' ಎಂಬ ಚಿಕ್ಕ ಹಳ್ಳಿ. ಅಲ್ಲಿ ರಂಗಪ್ಪ ಮತ್ತು ಗೌರಮ್ಮ ದಂಪತಿಗಳ ಸುಂದರ ಕುಟುಂಬ. ಅವರಿಗೆ ಆರು ಜನ ಮಕ್ಕಳ. ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು. ರಂಗಪ್ಪನವರಿಗೆ ಹಿರಿಯರಿಂದ ಬಂದಿದ್ದ ಸ್ವಲ್ಪ ಹೊಲ ಇತ್ತು. ಅದರಲ್ಲಿ ಹಗಲಿರುಳು ಬೆವರಿನ ಹನಿ ಸುರಿಸಿ, ಬೇಸಾಯ ಮಾಡಿ ಅತ್ಯಂತ ಗೌರವದಿಂದ ಬದುಕುತ್ತಿದ್ದರು. ಅಪ್ಪ - ಅಮ್ಮನಿಗೆ ತಮ್ಮ ಮಕ್ಕಳೆಲ್ಲರೂ ಒಳ್ಳೆಯ ಶಿಕ್ಷಣ ಪಡೆದು, ಸಮಾಜದಲ್ಲಿ ದೊಡ್ಡ ವ್ಯಕ್ತಿಗಳು ಆಗಬೇಕೆಂಬ ಹಂಬಲವಿತ್ತು.
ಆದರೆ, ಅವರ ಆರು ಜನ ಮಕ್ಕಳಲ್ಲಿ ಐವರು ಮಕ್ಕಳು, ರಂಗಪ್ಪ-ಗೌರಮ್ಮನ ಆಸೆಯಂತೆ ಓದಿನಲ್ಲಿ ಯಾವಾಗಲೂ ಮುಂದಿದ್ದರು. ಆದರೆ ಮೂರನೇಯ ಮಗ ಶಿವು ಮಾತ್ರ ಪೂರ್ತಿ ಭಿನ್ನ. ರಂಗಪ್ಪ ಮತ್ತು ಗೌರಮ್ಮ ಶಿವುನನ್ನು ಶಾಲೆಗೆ ಕಳುಹಿಸಲು ಪಟ್ಟಂತಹ ಪಾಡು ಅಷ್ಟಿಷ್ಟಲ್ಲ. ಊರಿನ ಶಿಕ್ಷಕರೇ ಖುದ್ದಾಗಿ ಮನೆಗೆ ಬಂದು ಕರೆದುಕೊಂಡು ಹೋದರೂ, ಶಿವು ಹೇಗೋ ತಪ್ಪಿಸಿಕೊಂಡು ಬಂದು ಕೊಟ್ಟಿಗೆಯಲ್ಲೋ ಅಥವಾ ತೋಟದ ಮೂಲೆಯಲ್ಲೋ ಅಡಗಿ ಕುಳಿತು ಬಿಡುತ್ತಿದ್ದನು.
ಒಂದು ದಿವಸ ರಂಗಪ್ಪ ಶಿವುನನ್ನು ಮನೆ ಹಜಾರದ ಕಂಬಕ್ಕೆ ಕಟ್ಟಿಹಾಕಿ, "ಯಾಕೋ ಶಾಲೆಗೆ ಹೋಗ್ತೋದಿಲ್ಲ? ಶಾಲೆಗೆ ಹೋಗಿ ಓದೋಕೆ, ಬರೆಯೋಕೆ ಏನೋ ನಿನಗೆ ದೊಡ್ಡ ರೋಗ?" ಎಂದು ಕೂಗಾಡಿದರು.
ಶಿವು ಅಳುತ್ತಲೇ, "ಅಪ್ಪಾ, ನನಗೆ ಮೇಷ್ಟ್ರು ಹೇಳೋದು, ಬರೆಯೋದು ಏನು ಗೊತ್ತಾಗಲ್ಲಪ್ಪ. ನಾನು ಸಾಲೆಗೆ ಹೋಗೋದಿಲ್ಲ. ನಾನು ಗುಡ್ಡಕ್ಕೆ ಹೋಗಿ ದನ, ಕುರಿ ಮೇಯಿಸುತ್ತೇನೆ." ಎಂದು ಅಪ್ಪನಿಗೆ ಹೇಳಿದನು.
ರಂಗಪ್ಪ ಬಹಳ ಪ್ರಯತ್ನಪಟ್ಟರೂ ಶಿವು ಪಾಟಿ ಚೀಲ, ಕಪ್ಪು ಹಲಗೆ ಕಂಡರೆ ಮಾರು ದೂರ ಓಡಿ ಹೋಗುವಷ್ಟು ಹಠ ಉಂಟಾಯಿತು.
'ಇವನ ತಲೆಯಲ್ಲಿ ವಿದ್ಯೆ ಹೋಗುತ್ತಿಲ್ಲ. ಇವನ ಹಣೆಬರಹದಲ್ಲಿ ಅಕ್ಷರ ಬರೆದಿಲ್ಲ' ಅಂತ ಜನರು ಆಡುತ್ತಿದ್ದ ಮಾತು ಕೇಳಿ ಬೇಸತ್ತ ರಂಗಪ್ಪನವರು, ಶಿವುನ ವಿಷಯದಲ್ಲಿ ಆಸೆ ಕೈಬಿಟ್ಟರು.
ವರ್ಷಗಳು ಉರುಳಿದವು. ಮನೆಯಲ್ಲಿ ಉಳಿದ ಐದು ಮಕ್ಕಳು ಚೆನ್ನಾಗಿ ಓದಿ, ಪದವಿ ಪಡೆದು ಸಿಟಿಯಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡರು. ಶಿವು ಮಾತ್ರ ಹಳ್ಳಿಯ ತೋಟದ ಕೆಲಸದಲ್ಲೇ ಉಳಿದನು.
ಶಿವು ಮನೆಯ ದೊಡ್ಡ ಜಾಗದಲ್ಲಿ ಕುಳಿತು ತನ್ನ ಪಾಡಿಗೆ ಅಡಿಕೆ ಸುಲಿಯುತ್ತಿದ್ದ. ಅಡುಗೆ ಮನೆಯ ಒಳಗಿನಿಂದ ತನ್ನ ತಾಯಿ ಗೌರಮ್ಮನ ಮಾತು ಕಿವಿಗೆ ಬಿತ್ತು. ಪಕ್ಕದವರ ಮನೆಯ ಮುಂದೆ ಅಮ್ಮ ಅಳುತ್ತಿದ್ದಳು. "ಯಾರಿಗೆ ಹೇಳೋಣ ಬಿಡಮ್ಮ ನಮ್ಮ ಹಣೆಬರಹ. ಎಲ್ರೂ ಚೆನ್ನಾಗಿಯೇ ಓದಿ, ಹೊರಗಡೆ ದುಡಿಯೋಕೆ ಹೋದರು. ಆದ್ರೆ ಇವನೊಬ್ಬ ಮಾತ್ರ ಇಲ್ಲೇ ಉಳಿದ. ನಾಲ್ಕು ಅಕ್ಷರ ಕಲಿತಿಲ್ಲ, ಒಳ್ಳೆಯ ಕೆಲಸ ಇಲ್ಲ, ಇಂತವನಿಗೆ ಯಾರು ಹೆಣ್ಣು ಕೊಡ್ತಾರೆ? ಇವನಿಂದಾಗಿ ನಾವು ಜನರ ಬಳಿ ತಲೆ ಎತ್ತಲಾಗದ ಸ್ಥಿತಿ ಆಗಿದೆ." ಎನ್ನುವ ಅಮ್ಮನ ನೋವಿನ ಮಾತುಗಳು ಶಿವುವಿನ ಕಿವಿಗೆ ಚುಚ್ಚಿದವು. ಅವನ ಕೈಗಳು ಒಂದು ಕ್ಷಣ ತಡವರಿಸಿದವು, ಮರುಕ್ಷಣವೇ ನಿಟ್ಟುಸಿರು ಬಿಟ್ಟು ಮತ್ತೆ ತನ್ನ ಕೆಲಸ ಮುಂದುವರೆಸಿದನು.
ಸಾಯಂಕಾಲದ ಹೊತ್ತಿಗೆ ಅಣ್ಣ ಶೇಖರ (ರಂಗಪ್ಪ-ಗೌರಮ್ಮನ ಎರಡನೇ ಮಗ) ಸಿಟಿಯಿಂದ ಬಂದಿಳಿದ. ವೈಟ್ ಅಂಡ್ ವೈಟ್ ಶರ್ಟು, ಕತ್ತಲ್ಲಿ ಚಿನ್ನದ ಚೈನು, ಕೈಯಲ್ಲೊಂದು ಮಿನುಗುವ ಸೋನಾಟಾ ವಾಚು.
ಅಡಿಕೆ ಬಿಡಿಸುತ್ತಿದ್ದ ಶಿವುನ ಬಳಿ ಬಂದು ಅಸಹ್ಯದಿಂದ ಮುಖ ತಿರುಚಿದನು. "ಏನೋ ಶಿವು, ನಿನ್ನ ಜೀವನವೆಲ್ಲ ಈ ಅಡಿಕೆ ಸಿಪ್ಪೆಯಲ್ಲೇ ಕಳೆದು ಹೋಗುತ್ತಾ? ಎಷ್ಟು ವರ್ಷ ಆದ್ರೂ, ನಿನ್ನ ಬದುಕು ಇಷ್ಟೇ. ನಾವು ಸಿಟಿಯಲ್ಲಿ ಆಫೀಸ್ ಕುರ್ಚಿಯಲ್ಲಿ ಕುಳಿತು, ಹತ್ತು ಜನರಿಗೆ ಆರ್ಡರ್ ಮಾಡ್ತೀವಿ. ನಿಂಗೆ ಹೊಲದಲ್ಲಿ ಕೆಲಸ ಮಾಡೋಕೆ ನಾಚಿಕೆ ಆಗಲ್ವಾ? ಯಾರಾದ್ರೂ ಪರಿಚಯದವರು ನಿನ್ನ ಬಗ್ಗೆ ಕೇಳಿದ್ರೆ, ನಮ್ಗೆ ಹೇಳೋಕೆ ನಾಚಿಕೆ ಆಗುತ್ತೆ ಕಣೋ. ಓದು, ಕೆಲಸ ಇಲ್ಲದವನಿಗೆ ಈ ಕಾಲದಲ್ಲಿ ನಾಯಿ ಬೆಲೆಯೂ ಇರಲ್ಲ" ಎಂದು ತುಚ್ಫವಾಗಿ ಹಂಗಿಸಿದ.
ಶಿವು ಕೈಯಲ್ಲಿದ್ದ ಕುಡುಗೋಲನ್ನು ಪಕ್ಕಕ್ಕಿಟ್ಟು ಅಣ್ಣನ ಕಡೆಗೆ ತಿರುಗಿ ನೋಡಿದ. ಶಿವು ಮುಖದಲ್ಲಿ ನೋವಿರಲಿಲ್ಲ, ಬದಲಾಗಿ ಒಂದು ಮೌನವಾದ ಗಾಂಭೀರ್ಯ ಇತ್ತು. "ಅಣ್ಣಾ, ನೀನು ವಿದ್ಯೆ ಕಲಿತು, ದೊಡ್ಡ ಆಫೀಸಲ್ಲಿ ಕುಳಿತು ಹತ್ತಾರು ಜನರಿಗೆ ಕೆಲಸ ಹೇಳ್ತೀಯಾ ನಿಜ. ಆದರೆ ನಾನು ಈ ಮಣ್ಣಲ್ಲಿ, ಸಾವಿರಾರು ಜೀವಗಳಿಗೆ ಆಹಾರ ಕೊಡುವ ಗಿಡಗಳನ್ನು ಬೆಳೆಸುತ್ತೇನೆ. ಅಡಿಕೆ ಬೆಳೆಯುತ್ತೇನೆ. ನಿನಗೆ ದುಡ್ಡಲ್ಲಿ ಸಿಗುವ ಬೆಲೆ ನನಗಿಂತ ದೊಡ್ಡದಿರಬಹುದು. ಆದರೆ ನನಗೆ ಇಲ್ಲಿ ಸಿಗುವ ಗಾಳಿ, ಇಲ್ಲಿನ ಜನರ ಪ್ರೀತಿ, ಅಪ್ಪ ಅಮ್ಮನಿಗೆ ಒಂದು ತುತ್ತು ಅನ್ನ ಕೊಟ್ಟು ಅವರ ಮುಖದಲ್ಲಿ ತೃಪ್ತಿ ನೋಡುವಾಗ ನನಗೆ ಸಿಗುವ ಆನಂದ ನಿನ್ನ ಆ ಸಿಟಿಯಲ್ಲಿ ಸಿಗೋದಿಲ್ಲಣ್ಣ" ಎಂದ.
ಮುಂದುವರಿದು...
"ನಿಮಗೆ ನಾನು ಓದು ಇಲ್ಲದವನಾಗಿ ಕಾಣಬಹುದು. ಆದರೆ ಈ ಭೂಮಿ ತಾಯಿಗೆ ನನ್ನ ಬೆವರು ಅಂದ್ರೆ ಇಷ್ಟ. ನೀನು ಓದಿನಲ್ಲಿ ಜೀವನ ಹುಡುಕಿದ್ರೆ, ನಾನು ಈ ಅಡಿಕೆ ಮರಗಳ ಮೌನದ ನಡುವೆ ನೆಮ್ಮದಿ ಹುಡುಕಿದ್ದೀನಿ. ನಿನಗೆ ನಿನ್ನ ಗೌರವ ದೊಡ್ಡದು, ನನಗೆ ನನ್ನ ಈ ಕಾಯಕವೇ ದೊಡ್ಡದು" ಎಂದು ಅಷ್ಟೇ ನಿಸ್ಸಂಕೋಚವಾಗಿ ಹೇಳಿದ.
ಶಿವು ಆಡಿದ ಮಾತುಗಳಲ್ಲಿ ಹೀಯಾಳಿಕೆಯಿಲ್ಲದಿದ್ದರೂ, ಬದುಕಿನ ಸತ್ಯದ ಹರಿತವಿತ್ತು. ಶೇಖರ ಏನು ಉತ್ತರ ಕೊಡಬೇಕೆಂದು ತಿಳಿಯದೆ ಬೆಪ್ಪಾಗಿ ನಿಂತ. ಶಿವು ಮತ್ತೆ ಶಾಂತವಾಗಿ ತನ್ನ ಅಡಿಕೆ ಬಿಡಿಸುವ ಕೆಲಸದಲ್ಲಿ ತಲ್ಲೀನನಾದ.
ಶಿವುಗೆ ವಿದ್ಯೆ ಇಲ್ಲದಿರಬಹುದು, ಆದರೆ ಅವನಿಗೆ ಅದ್ಭುತವಾದ ಕೆಲಸದ ಚಾಕಚಕ್ಯತೆ ಇದೆ. ತೋಟದ ಕೆಲಸದಿಂದ ಹಿಡಿದು, ಕೊಟ್ಟಿಗೆ ಕೆಲಸ, ಅಡುಗೆ ಮನೆಯ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದ.
ದಿನಗಳು ಉರುಳಿದವು. ಸಿಟಿಯಲ್ಲಿದ್ದ ಐದು ಮಕ್ಕಳು ಮದುವೆಯಾಗಿ ತಮ್ಮ ಸಂಸಾರ ಹೂಡಿದರು. ರಂಗಪ್ಪ ಗೌರಮ್ಮನವರಿಗೆ ಈಗ ವಯಸ್ಸಾಗಿತ್ತು, ಕಣ್ಣುಗಳು ಮಂಜಾಗಿದ್ದವು. ಅದೊಂದು ಭಾನುವಾರ, ಐವರ್ನಾಡು ಮಕ್ಕಳು ಕಾರುಗಳಲ್ಲಿ ಹಳ್ಳಿಗೆ ಬಂದಿಳಿದರು. ರಂಗಪ್ಪ ಸಂಭ್ರಮದಿಂದ, "ನೋಡು ಗೌರಿ, ನಮ್ಮ ಮಕ್ಕಳೆಲ್ಲಾ ನಮ್ಮನ್ನು ನೋಡಲು ಬಂದಿದ್ದಾರೆ" ಎಂದು ಖುಷಿ ಪಟ್ಟರು. ಅವರಿಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆದರೆ ಮಕ್ಕಳ ಉದ್ದೇಶ ಬೇರೆಯೇ ಇತ್ತು. ರಾತ್ರಿ ಊಟದ ಬಳಿಕ, ದೊಡ್ಡ ಮಗ ಮಂಜುನಾಥ ಮೆಲ್ಲಗೆ ವಿಷಯ ಪ್ರಸ್ತಾಪಿಸಿದ.
"ಅಪ್ಪಾ, ಊರಲ್ಲಿ ಇಷ್ಟೊಂದು ಆಸ್ತಿ ಇದೆ. ನೀವು ಇದ್ದಾಗಲೇ ಆಸ್ತಿ ಹಂಚಿಕೆ ಮಾಡಿ. ಸುಮ್ಮನೆ ಯಾಕೆ ಜಗಳ, ವೈಮನಸ್ಸು? ನಮಗೂ ಈಗ ಸಿಟಿಯಲ್ಲಿ ಫ್ಲಾಟ್ ತಗೋಳ್ಳೋಕೆ ಹಣ ಬೇಕು. ಆಸ್ತಿ ಹಂಚಿಕೆ ಮಾಡೋಣ ಅಂತಾನೇ ನಾವು ಬಂದಿರೋದು." ರಂಗಪ್ಪನವರ ಮುಖ ಸೊರಗಿತು.
"ನಾವಿಬ್ರೂ ಇನ್ನೂ ಬದುಕಿದ್ದೇವೆ. ನಾವು ಸತ್ತ ಮೇಲೆ ಇದೆಲ್ಲ ನಿಮಗೇ ಅಲ್ಲವೇ?" ಎಂದರು ನಡುಗುವ ದನಿಯಲ್ಲಿ. "ಇಲ್ಲಪ್ಪಾ, ನಮ್ಗೆ ಈಗಲೇ ಆಸ್ತಿ ಬೇಕು. ನಮಗೀಗ ದುಡ್ಡಿನ ಅವಶ್ಯಕತೆ ತುಂಬಾ ಇದೆ." ಎಂದು ಹೆಣ್ಣು ಮಕ್ಕಳು ದನಿಗೂಡಿಸಿದರು.
ಶಿವು ಅಡುಗೆ ಮನೆಯ ಹೊರಗಡೆ ಜಗುಲಿ ಮೇಲೆ ಕುಳಿತು ಇದೆಲ್ಲವನ್ನೂ ಕೇಳಿಸಿಕೊಂಡ. ಶೇಖರ ಹೇಳಿದ, "ಅವನಿಗಂತೂ ಮದುವೆ ಇಲ್ಲ, ಸಂಸಾರ ಇಲ್ಲ. ಅವನಿಗೆ ಒಂದಿಷ್ಟು ಜಾಗ ಕೊಟ್ಟರೆ ಸಾಕು, ಅವನು ತೋಟ ಕಾಯ್ಕೊಂಡು ಇಲ್ಲೇ ಇರ್ತಾನೆ. ನಮ್ಗೆ ನಮ್ಮ ಪಾಲು ಕೊಟ್ಟುಬಿಡಿ." ರಂಗಪ್ಪನವರು ಕಣ್ತುಂಬಿಕೊಂಡು ಪತ್ರಗಳಿಗೆ ಸಹಿ ಹಾಕಿದರು. ಐದು ಜನ ಮಕ್ಕಳು ತಮ್ಮ ಪಾಲು ಪಡೆದು ಸಿಟಿಗೆ ಹೊರಟರು. ಹೋಗುವಾಗ ಯಾರೊಬ್ಬರೂ ಕೂಡಾ, "ಅಪ್ಪ ಅಮ್ಮನಿಗೆ ಒಂದು ಮಾತು ಹೇಳದೆ ಹೋದರು."
ಮಕ್ಕಳೆಲ್ಲಾ ಹೋದ ಮೇಲೆ ಮನೆ ಸ್ಮಶಾನದಂತಾಯಿತು. ಗೌರಮ್ಮ ಜೋರಾಗಿ ಅಳುತ್ತಿದ್ದರು. "ಪಾಠ ಕಲಿತವರು ಬುದ್ಧಿವಂತರು ಅಂದುಕೊಂಡಿದ್ದೆವು, ಆದರೆ ಅವರು ಬರೀ ಸ್ವಾರ್ಥ ಕಲಿತಿದ್ದಾರೆ ಗೌರಿ," ಎಂದು ರಂಗಪ್ಪ ಬಿಕ್ಕಳಿಸಿದರು. ಶಿವು ಮೆಲ್ಲನೆ ಅಪ್ಪ ಅಮ್ಮನ ಬಳಿ ಬಂದು ಕುಳಿತ. "ಅಮ್ಮ, ಅಳ್ಬೇಡಿ. ಅಣ್ಣಂದಿರಿಗೆ-ತಂಗಿಯರಿಗೆ ಅವರ ಬದುಕು ಮುಖ್ಯ ಆಯ್ತು ಅಷ್ಟೇ. ನೀವಿದ್ದೀರಲ್ಲ ನನ್ಗೆ, ಅಷ್ಟೇ ಸಾಕು. ಆಸ್ತಿ ಹೋದರೆ ಹೋಗಲಿ, ಅರೋಗ್ಯ ಮುಖ್ಯ" ಎಂದು ತಂದೆ ತಾಯಿಗೆ ಸಾಂತ್ವನ ಹೇಳಿದನು ಶಿವು.
ಸ್ವಲ್ಪ ದಿನಗಳಲ್ಲೇ ರಂಗಪ್ಪನವರಿಗೆ ಪಾರ್ಶ್ವವಾಯು ಹೊಡೆದು ಹಾಸಿಗೆ ಹಿಡಿದರು. ಗೌರಮ್ಮನಿಗೆ ಒಬ್ಬರೇ ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಶಿವು ತೋಟದಲ್ಲೂ ಕೆಲಸ ಮಾಡಿ, ಹಗಲಿರುಳು ತಂದೆಯ ಸೇವೆಯಲ್ಲಿ ತೊಡಗಿದ. ಮಲ-ಮೂತ್ರಗಳನ್ನು ಬಾಚಿ, ತಂದೆಯನ್ನು ಮಗುವಿನಂತೆ ಸ್ನಾನ ಮಾಡಿಸಿ, ಸಮಯಕ್ಕೆ ಸರಿಯಾಗಿ ತುತ್ತು ನೀಡುತ್ತಿದ್ದ. ರಂಗಪ್ಪನ ಕಣ್ಣುಗಳಲ್ಲಿ ಪಶ್ಚಾತ್ತಾಪದ ನೀರು ಹರಿಯುತ್ತಿತ್ತು. ಶಿವು ಅಪ್ಪನ ಕಾಲನ್ನು ಒತ್ತುತ್ತಾ, "ಅಪ್ಪಾ, ಯಾಕೆ ಅಳ್ತೀರಾ? ನಾನು ಓದಿಲ್ಲ ಅನ್ನೋ ಬೇಜಾರಾ? ನೋಡಿ, ನಾನು ವಯಸ್ಕರ ಶಾಲೆಗೆ ಹೋಗಿ ಸಹಿ ಹಾಕೋದನ್ನು ಕಲಿತಿದ್ದೀನಿ. ಇವತ್ತು ಬ್ಯಾಂಕಿನ ವ್ಯವಹಾರ ನಾನೇ ಮಾಡಿ ಬಂದೆ" ಎಂದು ನಕ್ಕ. ಮಗನ ಸಂತೋಷ ಕಂಡು, ರಂಗಪ್ಪನವರ ಮುಖ ಅರಳಿತು.
ನಗರದಲ್ಲಿದ್ದ ಮಕ್ಕಳಿಗೆ ಫೋನ್ ಮಾಡಿದಾಗ, "ನಮಗೆ ಇಲ್ಲಿ ಕೆಲಸ ಜಾಸ್ತಿ ಇದೆ, ರಜೆ ಸಿಗೋಲ್ಲ, ಶಿವು ಇದ್ದಾನಲ್ಲ ಅವನು ನೋಡಿಕೊಳ್ತಾನೆ" ಎಂಬ ಹಾರಿಕೆಯ ಉತ್ತರಗಳು ಬಂದವು. ಶಿವು ಒಬ್ಬನೇ ತೋಟದ ಕೆಲಸವನ್ನೂ ಮಾಡಿ, ಹೆತ್ತವರನ್ನು ನೋಡಿಕೊಂಡನು.
ಒಂದು ದಿನ ಮಳೆ ಸುರಿಯುತ್ತಿತ್ತು. ಗೌರಮ್ಮ ಶಿವುವಿನ ಕೆಲಸವನ್ನು ನೋಡಿ ತುಂಬು ಹೃದಯದಿಂದ ಖುಷಿ ಪಟ್ಟರು. ರಂಗಪ್ಪನವರ ಕೈ ಹಿಡಿದು ಹೇಳಿದರು, "ರೀ, ನಾವು ಎಷ್ಟು ಅನ್ಯಾಯ ಮಾಡಿದ್ವಿ ಅಲ್ವಾ? ಓದಿಲ್ಲ ಅಂತ ಶಿವುನ ಹಂದಿಗಿಂತ ಕಡೆ ಅಂದ್ವಿ. ಆದ್ರೆ ಇವತ್ತು ಆ ನಮ್ಮ ದೊಡ್ಡ ಸಾಹೇಬರುಗಳು ಯಾರೂ ಬರಲಿಲ್ಲ. ನಮಗೆ ಕೈತುತ್ತು ಕೊಟ್ಟವನು ಇವನೇ."
ರಂಗಪ್ಪ ಕಷ್ಟಪಟ್ಟು ಮಾತನಾಡಿದರು, "ಗೌರಿ, ದೇವರಿಗೆ ಮೊದಲೇ ಗೊತ್ತಿತ್ತು ಅನ್ಸುತ್ತೆ. ಶಿವುಗೆ ವಿದ್ಯೆ ಕೊಟ್ಟು ನೌಕರಿ ಕೊಟ್ಟಿದ್ದರೆ ಅವನು ನಮ್ಮನ್ನು ಅನಾಥರನ್ನಾಗಿ ಬಿಟ್ಟು ಎಲ್ಲಿಯೋ ದೂರ ಹೋಗುತ್ತಿದ್ದ. ಅವನಿಗೆ ವಿದ್ಯೆ ಕೊಡದೆ ಇಲ್ಲಿಯೇ ಉಳಿಸಿಕೊಂಡಿದ್ದು ನಮ್ಮನ್ನು ಕಡೆಯ ಕಾಲದಲ್ಲಿ ಸಲಹಲು. ನಮ್ಮ ಪಾಪಕ್ಕೆ ಅವನೇ ಮದ್ದಾದ."
ಶಿವು ಇದನ್ನು ಕೇಳಿ, "ಅಮ್ಮಾ, ಅಪ್ಪಾ... ಈ ಮಾತು ಬೇಡ. ಅಕ್ಷರ ಇಲ್ಲದಿದ್ದರೆ ಏನಂತೆ, ಹೃದಯಕ್ಕೆ ಮಾತು ಅರ್ಥ ಆಗುತ್ತೆ. ನೀವು ನನ್ನ ಸಾಕಿ ಬೆಳೆಸಿದವರು, ನಿಮ್ಮನ್ನು ನೋಡಿಕೊಳ್ಳೋದು ನನ್ನ ಪುಣ್ಯ" ಎಂದನು.
ಇಂದು 'ಕಮ್ಮತ್ತಳ್ಳಿ' ಹಳ್ಳಿಯಲ್ಲಿ ರಂಗಪ್ಪ ಮತ್ತು ಗೌರಮ್ಮ ನೆಮ್ಮದಿಯಿಂದ ಇದ್ದಾರೆ. ಶಿವುಗೆ ಮದುವೆಯಾಗದಿರಬಹುದು, ಆದರೆ ಇಡೀ ಊರೇ ಅವನನ್ನು 'ನಮ್ಮ ಹಳ್ಳಿಯ ಮನೆ ಮಗ' ಎಂದು ಕರೆಯುತ್ತಿದೆ. ಆಸ್ತಿ ಹಂಚಿಕೊಂಡು ಹೋದ ಐವರು ಮಕ್ಕಳು ಇಂದು ಹಣವಿದ್ದರೂ ಶಾಂತಿಯಿಲ್ಲದೆ ಅಲೆಯುತ್ತಿದ್ದಾರೆ. ಶಿವುಗೆ ಪುಸ್ತಕದ ಅರಿವಿಲ್ಲದಿದ್ದರೂ, ಅವನಿಗೆ 'ಬದುಕು' ಎನ್ನುವ ದೊಡ್ಡ ಗ್ರಂಥ ಪೂರ್ತಿಯಾಗಿ ಅರ್ಥವಾಗಿದೆ. ಶಿವುನ ಕಥೆ ನಮಗೆ ತಿಳಿಸುವುದೇನೆಂದರೆ, ಪದವಿಗಳು ಕೇವಲ ನೌಕರಿ ಕೊಡಬಹುದು, ಆದರೆ ಮಾನವೀಯತೆ ಮತ್ತು ಪ್ರೀತಿ ಕೇವಲ ಸಂಸ್ಕಾರದಿಂದ ಮಾತ್ರ ಬರುತ್ತದೆ.
ಸಮಾಪ್ತಿ.
ರವಿ ಬೂಕನಬೆಟ್ಟ
ಗಮನಿಸಿ: "ಈ ಕಥೆಯು ಕೌಟುಂಬಿಕ ಮೌಲ್ಯಗಳನ್ನು ಎತ್ತಿ ತೋರಿಸುವ ಸದುದ್ದೇಶದಿಂದ ಬರೆಯಲಾಗಿದೆ. ಯಾವುದೇ ನೈಜ ವ್ಯಕ್ತಿಗಳಿಗೆ ಇದು ಸಂಬಂಧಿಸಿದಲ್ಲ."
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ